ವೃತ್ತಿಗಾಯಕರಲ್ಲಿ ಒಂದು ಸಂಪ್ರದಾಯದವರು. ಇವರು ಹಿರಿಯ ಮೈಲಾರ ಮತ್ತು ಇತರ ಕಡೆಗಳಲ್ಲಿರುವ ಮೈಲಾರ ಲಿಂಗನ ಕ್ಷೇತ್ರಗಳಿಗೆ ನಡೆದುಕೊಳ್ಳುತ್ತಾರೆ. ದಕ್ಷಿಣ ಕರ್ನಾಟಕದಲ್ಲಿ ಇವರು ಹಾಡುತ್ತಿದ್ದ ಮೈಲಾರ ಲಿಂಗನ ಕಥೆ ಈಚೆಗೆ ಅಪರೂಪವಾಗುತ್ತಿದೆ.
ಗೊರವರನ್ನು ದಕ್ಷಿಣ ಕರ್ನಾಟಕದಲ್ಲಿ ಗೊರವ, ವಗ್ಗಯ್ಯ, ಗೊಗ್ಗಯ್ಯ, ಗಡಬದ್ದಯ್ಯ, ಕಡಬಡ್ಡ ಎಂದೂ ಉತ್ತರ ಕರ್ನಾಟಕದಲ್ಲಿ ವ್ಯಾಘ, ಗ್ವಾರಪ್ಪ ಎಂದೂ ಕರೆಯುವುದು ರೂಢಿ. ಗೊರವ ಶಬ್ದಕ್ಕೆ ಕಿಟ್ಟೆಲ್ ನಿಘಂಟಿನಲ್ಲಿ ಒಂದು ಬಗೆಯ ಶೈವ ಭಿಕ್ಷುಕರು ಎಂದು ಹೇಳಿದೆ. ಗುರು ಎಂಬುದೇ ಗೊರವ ಶಬ್ದದ ಮೂಲ ಎಂದೂ ಕೆಲವರ ಅಭಿಪ್ರಾಯ. ಗೊಗ್ಗ ಎಂದರೆ ಮೈಲಾರ ಲಿಂಗದ ಹಿಂಬಾಲಕರು ಎಂದು ಕಿಟ್ಟೆಲ್ ನಿಘಂಟಿನ ವಿವರಣೆ. ಮಕ್ಕಳನ್ನು ಹೆದರಿಸಲು ಗೊಗ್ಗ ಬಂದ, ಗೊಗ್ಗಯ್ಯ ಬಂದ-ಎಂದು ತಾಯಂದಿರು ಹೇಳುವ ವಾಡಿಕೆ ಇದೆ. ಗೊರವ ಶಬ್ದವೇ ಗೊಗ್ಗಯ್ಯ ಆಗಿರುವ ಸಂಭವವೂ ಇಲ್ಲದಿಲ್ಲ.
ಕನ್ನಡ ಸಾಹಿತ್ಯದಲ್ಲಿ ಕ್ರಿ. ಶ. 12ನೆಯ ಶತಮಾನಕ್ಕೂ ಹಿಂದೆಯೇ, ಗೊರವ ಶಬ್ದದ ಉಲ್ಲೇಖ ನಯಸೇನನ ಧರ್ಮಾಮೃತದಲ್ಲಿದೆ. ಇಲ್ಲಿ ಕವಿ ಪ್ರಾಸಂಗಿಕವಾಗಿ ಗೊರವರನ್ನು ವರ್ಣಿಸಿದ್ದಾನೆ.
ಗೊರವರು ಮೇಳ ನಡೆಸುವುದೂ ಉಂಟು. ರಾತ್ರಿಯೆಲ್ಲ ನಡೆಯುವ ಈ ಮೇಳದಲ್ಲಿ ಮೂರು ಜನ ಭಾಗವಹಿಸುತ್ತಾರೆ. ನಡುವೆ ಇರುವ ಕತೆಗಾರ ಡಮರುಗ ಆಡಿಸುತ್ತ ಕತೆಯನ್ನು ನಿರೂಪಿಸುತ್ತ ಹೋದರೆ ಉಳಿದ ಇಬ್ಬರು ಅದೇ ರೀತಿ ನುಡಿಸುತ್ತ ಹಿಮ್ಮೇಳದಲ್ಲಿದ್ದು ಹಾಡುತ್ತಾರೆ. ಈ ಸಂದರ್ಭದಲ್ಲಿ ಮೈಲಾರಲಿಂಗನ ಲೀಲೆಗಳನ್ನು ಪ್ರಮುಖವಾಗಿ ಹಾಡುವುದಾದರೂ ಮೈಸೂರು ಭಾಗದಲ್ಲಿ ಕೆಲವರು ಮಾದೇಶ್ವರ ಮತ್ತು ಮಂಟೇಸ್ವಾಮಿ ಕಾವ್ಯಗಳನ್ನು ಹಾಡುವುದುಮಟು. ಭಕ್ತರ ಮನೆಗಳಲ್ಲಿ ಹಿಂದೆ ಇಂಥ ಮೇಳಗಳು ನಡೆಯುತ್ತಿದ್ದುವು.
ದಕ್ಷಿಣ ಕರ್ನಾಟಕದ ಗೊರವರಿಗೂ ಉತ್ತರ ಕರ್ನಾಟಕದ ಗೊರವರಿಗೂ ಅವರ ವೇಷಭೂಷಣದಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸಗಳಿವೆ. ದಕ್ಷಿಣದವರಲ್ಲಿ ಕಂಬಳಿಯ ನಿಲುವಂಗಿ. ಗೊರಳಲ್ಲಿ ಭಂಡಾರ ಇಡುವ ಹುಲಿಚರ್ಮದ ಚೀಲ. ಕವಡೆಸರ. ಹೆಗಲಲ್ಲಿ ಭಿಕ್ಷಾಪಾತ್ರೆ, ದೋಣಿ, ಕೈಯಲ್ಲಿ ಡಮರುಗ, ತ್ರಿಶೂಲ- ಇವು ಮುಖ್ಯವಾದವು. ತಲೆಯ ಮೇಲೆ ಬಿಳಿಯ ರುಮಾಲು ಇರುತ್ತದೆ. ಕೆಲವೊಮ್ಮೆ ಕರಡಿಯ ಕೂದಲ ಕುಲಾವಿ ಧರಿಸುವುದೂ ಉಂಟು. ಉತ್ತರದವರು ಮೇಲಿನ ವೇಷಭೂಷಣಗಳ ಜೊತೆಗೆ ಒಕ್ಕಳಗಂಟೆ, ರಟ್ಟೆಬಳೆ, ಕಾಲಗೆಜ್ಜೆ, ಹುಲಿ ಚರ್ಮ, ಕೊರಳ ಕವಡೆ ನಡುಪಟ್ಟಿ, ಎಲೆಸಂಚಿ, ಮತ್ತು ಪಿಳ್ಳಂಗೊವಿ ಮೊದಲಾದುವನ್ನು ಬಳಸುತ್ತಾರೆ. ಕರಡಿ ಕೂದಲ ಟೋಪಿ, ಕರಿಯ ನಿಲುವಂಗಿ, ಅದರ ಮೇಲೆ ಕವಡೆ ಪಟ್ಟಿಗಳನ್ನು ಧರಿಸುವುದು ಸಾಮಾನ್ಯ. ಗೊರವರಿಗೂ ದೀಕ್ಷೆ ಕೊಡುವ ಸಂಪ್ರದಾಯ ಉಂಟು. ಮನೆಯ ಹಿರಿಯ ಮಗ ಈ ದೀಕ್ಷೆಗೆ ಅರ್ಹ. ಹೆಚ್ಚಾಗಿ ಇವರು ಹಾಲುಮತದ ಕುರುಬರೇ ಆಗಿರುತ್ತಾರೆ. ಹರಿಜನರೂ ಇತರ ಮತದವರೂ ವಿರಳವಾಗಿ ಕಂಡುಬರುತ್ತಾರೆ, ಗುರುವಿನಿಂದ ದೀಕ್ಷೆ ಪಡೆಯುವಾಗ ಕಾಲಿಗೆ ಮಿಂಚು, ಕೈಗೆ ಕಂಕಣ, ಪಂಚಕಳಸ, ಕಂಬಳಿ ಗದ್ದುಗೆಗಳೊಡನೆ ತಮ್ಮ ದೇವರುಗಳ ಹೆಸರಿನಲ್ಲಿ ಪ್ರಮಾಣ ಮಾಡುತ್ತಾರೆ. 'ಒಂದು ದನ ಹೋಗಿ ಒಂದು ಹೊಲದಲ್ಲಿ ಮೇಯ್ತಾ ಇದ್ದರೆ ಮೇಯುತ್ತೆ ಎಂದು ಹೇಳುವುದಿಲ್ಲ: ಕರ ಹಾಲು ಕುಡಿಯುತ್ತಿದ್ದರೆ ಕುಡಿಯುತ್ತೆ ಎಂದು ಹೇಳುವುದಿಲ್ಲ. ಕಾಲಿಗೆ ಎಕ್ಕಡ ಹಾಕುವುದಿಲ್ಲ, ಗಾಡಿ ಮೇಲೆ ಕೂರುವುದಿಲ್ಲ. ಸರ್ಪವನ್ನು ಹೊಡೆಯುವುದಿಲ್ಲ. ತಾಯಿ ತಂದೆ ದೂಷಣೆ ಮಾಡುವುದಿಲ್ಲ- ಇದು ಅವರ ಪ್ರಮಾಣವಚನ.
ಮೈಲಾರ ಲಿಂಗನ ಕ್ಷೇತ್ರಗಳು ದಕ್ಷಿಣ ಭಾರತದಲ್ಲಿ ಅನೇಕ ಇವೆ. ಅದರಲ್ಲೂ ಕರ್ನಾಟಕದಲ್ಲಿ ಹೇರಳ. ಧಾರವಾಡ ಜಿಲ್ಲೆಯ ದೇವರಗುಡ್ಡ (ಹಿರಿಯ ಮೈಲಾರ), ದೇವಿ ಹೊಸೂರು. ಬೀದರ್ ಜಿಲ್ಲೆಯ ಮೈಲಾರಪುರ, ಬಳ್ಳಾರಿ ಜಿಲ್ಲೆಯ ಮಣ್ಣು ಮೈಲಾರ, ಬೆಳಗಾಂವಿ ಜಿಲ್ಲೆಯ ಕಾರಿಮನಿ, ಮಂಗಸೂಳಿ, ಶಿವಮೊಗ್ಗ ಜಿಲ್ಲೆಯ ಕುಬಟೂರು. ಮೈಸೂರು ಜಿಲ್ಲೆಯ ಮುಡುಕುತೊರೆ, ಬೆಂಗಳೂರು ಜಿಲ್ಲೆಯ ಹೆನ್ನಾಗರಗ್ರಾಮ, ಮಂಡ್ಯ ಜಿಲ್ಲೆಯ ಮೈಲಾರಪಟ್ಟಣ- ಮುಂತಾದ ಕಡೆ ಮೈಲಾರ ಲಿಂಗನ ಕ್ಷೇತ್ರಗಳನ್ನು ನೋಡಬಹುದಾಗಿದೆ. ಇವುಗಳಲ್ಲಿ ದೇವರಗುಡ್ಡ ಕ್ಷೇತ್ರವೇ ಮುಖ್ಯವಾದುದು.
ಮೈಲಾರ ಲಿಂಗನನ್ನು ಕುರಿತು ಅನೇಕ ಕಾವ್ಯಗಳಿವೆ. ಸ್ಥಳಪುರಾಣ ರೂಪದಲ್ಲಿ ಸಂಸ್ಕøತ ಕಾವ್ಯವೊಂದು ದೊರೆತಿದೆ. ಜನಪದ ಕತೆಯೂ ಉಂಟು. ಈಗಿನ ಗೊರವ ಸಂಪ್ರದಾಯದ ಮೇಲೆ ಬೆಳಕು ಚೆಲ್ಲುವ ಬೇರೊಂದು ಕಥೆ ಕಂಠಸ್ಥ ಹಾಡಿನ ರೂಪದಲ್ಲಿದ್ದು ಈಗ ಕಣ್ಮರೆಯಾಗಿದೆ. ಮೈಲಾರಲಿಂಗ ಮತ್ತು ಕೋಮಲೆಯರ ಪ್ರಣಯ ಪ್ರಸಂಗಕ್ಕೆ ಸೇರಿದ ಜನಪದ ಕಥನಗೀತೆ ಚಿತ್ರದುರ್ಗ ತುಮಕೂರು ಶಿವಮೊಗ್ಗ ಜಿಲ್ಲೆಗಳಲ್ಲಿ ಲಭ್ಯವಾಗಿದೆ.
ಹಿರಿಯ ಮೈಲಾರದ ಸುತ್ತಿನಲ್ಲಿ ಮೈಲಾರಲಿಂಗನನ್ನು ಕುರಿತ ಧಾರ್ಮಿಕ ಕಾವ್ಯವೊಂದು ಈಗಲೂ ಪ್ರಚಲಿತವಾಗಿದೆ. ದೇವರ ಮಹಿಮೆಗಳು ಮತ್ತು ಪವಾಡಗಳ ಹಿನ್ನೆಲೆಯಲ್ಲಿ ಅಪೂರ್ವ ಕಲ್ಪನೆ, ನೈಜಚಿತ್ರಣ, ಆಯಾ ನೆಲದ ಭಾಷೆಯ ಅಪರೂಪದ ಶೈಲಿ ವಿಶಿಷ್ಟ ಸಂಭಾಷಣೆ- ಇವುಗಳಿಂದಾಗಿ ಇದರ ಕಥೆಗಾರಿಕೆ ಬಹಳ ಸೊಗಸಾದುದು.
ಈ ಸಂಬಂಧದಲ್ಲಿರುವ ಜನಪದ ಕಥೆ ಅಪರೂಪವಾದುದು. ತುಪ್ಪದ ಮಾಳಮ್ಮ ಶ್ರೀಮಂತ ಹೆಣ್ಣುಮಗಳು, ತನ್ನ ಐದು ಜನ ಅಣ್ಣಂದಿರಾದ ಚಿಕ್ಕಸಿದ್ದ, ದೊಡ್ಡಸಿದ್ದ, ಬೀರಜ್ಜ, ಕರಿಯಾಲ, ಕೆಂದಾಲ ಎಂಬುವರಿಗೆ ಮಾಳರ್ಮ ಬುತ್ತಿಯನ್ನು ಹೊತ್ತು ತರುತ್ತಿದ್ದಳು. ಏಳು ಹೆಡೆಯ ಸರ್ಪವನ್ನೇ ಅವಳು ತನ್ನ ಸಂಬಿಯನ್ನಾಗಿ ಮಾಡಿಕೊಂಡಿದ್ದಳು. ಆಗ ಮೈಲಾರಲಿಂಗ ಮಾಳಮ್ಮ ಬುತ್ತಿ ಹೊತ್ತು ಹೋಗುತ್ತಿದ್ದ ಕಡೆಗೆ ಬಂದು ಅವಳನ್ನು ತಡೆದು ನಿಲ್ಲಿಸಿ ಗಂಗೆ ಮಾಲಿಯೊಡನೆ ತನಗೊಂದು ಮದುವೆಯಾಗಿದೆ. ತನ್ನ ಲಿಂಗಕ್ಕೊಂದು ಮದುವೆಯಾಗಬೇಕು- ಎಂದು ಹೇಳಿದ. ಅವನ ವೇಷ ಅಪ್ಪಟ ಗೊರವನಂತಿತ್ತು. ಈ ವಿಚಿತ್ರ ವೇಷದವನನ್ನು ನೋಡಿದ ಮಾಳಮ್ಮ ರಾಕ್ಷಸ ಬಂದನೆಂದು ಹೆದರಿದಳು. ಆಕೆಯ ಅಣ್ಣಂದಿರು ಹತ್ತಿರದಲ್ಲೇ ಕುರಿ ಕಾಯುತ್ತಿದ್ದರು. ತಂಗಿ ಕೂಗಿದ ಶಬ್ದ ಕೇಳಿದ ಚಿಕ್ಕಸಿದ್ದ ಏಳು ಯೋಜನ ಉದ್ದದ ಬೂರಗ ಮರ ಹತ್ತಿ ನೋಡಿದ. ಆಕಾಶಕ್ಕೂ ಭೂಮಿಗೂ ಒಂದೇ ಆಗಿ ಮೈಲಾರಲಿಂಗ ನಿಂತಿದ್ದನ್ನು ಕಂಡ. ಯಾರೋ ರಾಕ್ಷಸನಿರಬೇಕೆಂದು ಹೆದರಿದ. ಆರು ಸಾವಿರ ಕುರಿ ಹಾಲು ಕರೆದು ತನ್ನ ಎರಡು ನಾಯಿಗಳಿಗೂ ಇಟ್ಟು ಆ ರಾಕ್ಷಸನನ್ನು ಸೀಳಿ ಬನ್ನಿ ಎಂದು ಹೇಳಿ ಛೂಬಿಟ್ಟ. ನಿಮ್ಮ ಅಣ್ಣನ ನಾಯಿಗಳು ನನ್ನನ್ನು ಏನೂ ಮಾಡಲಾರವು ಎಂದ ಗೊರವಯ್ಯ ಭಂಡಾರವನ್ನು ನಾಯಿಗಳ ಮುಖಕ್ಕೆ ಬಡಿದ. ವೈರವನ್ನು ಬಿಟ್ಟ ನಾಯಿಗಳು ಆತನನ್ನು ಮುದ್ದಾಡಲು ಪ್ರಾರಂಭಿಸಿದುವು. ಅನಂತರ ಗೊರವಯ್ಯ ಮಾಳಮ್ಮನ ರಟ್ಟೆ ಹಿಡಿಯಲು ಹೋದ. ತನ್ನ ಕೊರಳಿನ ಸರ್ಪ ಕಚ್ಚುತ್ತದೆ ಎಂದು ಮಾಳಮ್ಮ ಬೆದರಿಸಿದಳು. ಅದಕ್ಕೂ ಗೊರವಯ್ಯ ಭಂಡಾರ ಹಾಕಿದ. ಆಗ ಅವಳ ಕತ್ತು ಬಿಟ್ಟು ಗೊರವಯ್ಯನ ಕತ್ತಿಗೆ ಬಂದು ಸುತ್ತಿಕೊಂಡಿತು ಆ ಸರ್ಪ. ಅನಂತರ ಮಿಕ್ಕ ಅಣ್ಣಂದಿರು ಓಡಿಬಂದು ದೊಣ್ಣೆಗಳಿಂದ ಗೊರವಯ್ಯನಿಗೆ ಪೆಟ್ಟು ಹಾಕಿದರು. ಆದರೆ ಆ ಪೆಟ್ಟುಗಳು ಮಾಳಿಗೆ ತಗಲಿ ಅವಳ ಮೈಮೇಲೆ ಬಾಸುಂಡೆಗಳೆದ್ದುವು.
ತುಪ್ಪದ ಮಾಳಿ ಲಗ್ನ ಆಗಲು ಬಂದುದಾಗಿ ಗೊರವಯ್ಯ ಹೇಳಿದಾಗ ಅಣ್ಣಂದಿರು 'ಆರು ಸಾವಿರ ಕುರಿ ಮೇಯಿಸಬೇಕು. ಮೂರು ಸಾವಿರ ಮರಿಗೆ ಹಾಲು ಕುಡಿಸಬೇಕು. ಮರಿಗೆ ಸೊಪ್ಪು ಸದೆ ತರಬೇಕು. ಏಳು ಮೊಳದ ಜಾಡಿಯನ್ನು ಒಂದು ದಿನಕ್ಕೆ ತೆಗೀಬೇಕು. ಇಷ್ಟು ಮಾಡಿದರೆ ನಮ್ಮ ತಂಗಿ ಕೊಟ್ಟು ಲಗ್ನ ಮಾಡ್ತೀವಿ ಎಂದರು. ಅದಕ್ಕೂ ಗೊರವಯ್ಯ ಒಪ್ಪಿಕೊಂಡ. ಮಾಂiÀiದಿಂದ ಗಂಗೇಮಾಳಿಯನ್ನು ಕರೆಸಿದ. ಇಬ್ಬರೂ ಕೂಡಿ ಎಲ್ಲ ಕೆಲಸಗಳನ್ನೂ ಮುಗಿಸಿದರು. ಕಂಬಳಿ ನೇದು ಕೊಟ್ಟರು. ಇಷ್ಟಾದರೂ ಅಣ್ಣಂದಿರು ಮದುವೆಗೆ ಒಪ್ಪಲಿಲ್ಲ. ಕೊನೆಗೆ ತುಪ್ಪದ ಮಾಳಿಯನ್ನು ಅರೀನಾಯಿಯಾಗಿ ಮಾಡಿಕೊಂಡು ಗೊರವ ಹೊರಟುಬಿಟ್ಟ. ಅಣ್ಣಂದಿರು ಬೆನ್ನಟ್ಟಿ ಬಂದರು. ಆಗ ಗೊರವಯ್ಯ ಐದು ಜನರ ಕತ್ತುಗಳಿಗೂ ಮೂರು ಮೂರು ಕವಡೆ ಕಟ್ಟಿ ಐದು ಬಟ್ಟಲು ಐದು ಡಮರುಗ ಕೊಟ್ಟು ದೋಣಿ ಸೇವೆ ಮಾಡಿಸಿದ. ಮೂಲತಃ ಗೊರವರಿಗೆ ಮೈಲಾರಲಿಂಗನೇ ಗೊರವ ದೀಕ್ಷೆ ಕೊಟ್ಟನೆನ್ನುವ ವಿಚಾರ ಈ ಪ್ರಸಂಗದಲ್ಲಿ ವಿದಿತವಾಗುತ್ತದೆ. ಈ ಜನಪದ ಕಥೆ ನೃತ್ಯರೂಪದಲ್ಲಿ ಈಗಲೂ ಅಲ್ಲಲ್ಲಿ ಬಳಕೆಯಲ್ಲಿದೆ. (ವಿ.ಆರ್.ಟಿ)
ಗೊರವರು ಮಾಡುವ ಸಾಮೂಹಿಕ ನೃತ್ಯಕ್ಕೆ ಗೊರವರ ಕುಣಿತ ಎಂದು ಹೇಳುತ್ತಾರೆ. ಒಂದು ತಂಡದಲ್ಲಿ ಸುಮಾರು ಹತ್ತರಿಂದ ಹನ್ನೆರಡು ಮಂದಿ ಇರುತ್ತಾರೆ. ಕುಣಿತ ಆರಂಭಿಸುವ ಮೊದಲು ಹಿರಿಯ ಗೊರವ ಪಿಳ್ಳಂಗೀವಿ ಊದಿ ಡಮರುಗ ಬಾರಿಸುತ್ತಾರೆ. ಅನಂತರ ಡಮರುಗದ ಗತಿಗೆ ತಕ್ಕಂತೆ ಮುಂದೆಜ್ಜೆ ಹಿಂದೆಜ್ಜೆ ಹಾಕುತ್ತ ಕುಣಿಯ ತೊಡಗುತ್ತಾರೆ. ಟೊಪ್ಪಿಗೆಯನ್ನು ಮುಂದೆ ಚಾಚುತ್ತ, ವೃತ್ತಾಕಾರದಲ್ಲಿ ಸುತ್ತುತ್ತ ಕುಣಿತಕ್ಕೆ ವೈವಿಧ್ಯತೆ ತರುವುದುಂಟು. ಗೊರವರ ಕುಣಿತ ಸಾರ್ವಜನಿಕವಾಗಿ ಪ್ರದರ್ಶನಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಭಕ್ತರು ನೂತನ ಗೃಹಪ್ರವೇಶ ಸಂದರ್ಭದಲ್ಲಿ ಗೊರವರನು ಕರೆಸಿ ಕುಣಿತ ಮಾಡುತ್ತಾರೆ. ಇದಕ್ಕೆ 'ಮಾಣಿಸೇವೆ ಒಗ್ಗಸೇವೆ ಎಂದು ಕರೆಯಲಾಗುವುದು. ಕರಿಯ ಕಂಬಳಿಸುತ್ತ ಕಿಣಿಯಿತ್ತ ದೋಣೊಯಲ್ಲಿಟ್ಟ ರಸಾಯನ ಮತ್ತು ಹಾಲನ್ನು ಕೈಯಲ್ಲಿ ಮುಟ್ಟದೇ ಹಾಗೆಯೇ ಸೇವಿಸಿವುದು ಇಲ್ಲಿನ ವಿಶೇಷ.
ಗೊರವರಿಗೆ ಸಂಬಂಧಿಸಿದ ಅನೇಕ ವಸ್ತುಗಳನ್ನು ಮೈಸೂರು ವಿಶ್ವವಿದ್ಯಾನಿಲಯದ ಜಾನಪದ ವಸ್ತು
ಸಂಗ್ರಹಾಲಯದಲ್ಲಿ ಸಂಗ್ರಹಿಸಿ ಇಡಲಾಗಿದೆ.
ಕೃಪೆ:- ಮೈಲಾರ ಗೊರವರ ಸಂಘ
No comments:
Post a Comment