☜☆☞☜☆☞☜☆☞☜☆☞
ಸ್ವಾಮಿ ನಮ್ಮಯ ದೇವರು ಬಂದಾನ ಬನ್ನಿರೇ
ಸ್ವಾಮಿ ನಮ್ಮಯ ಗುರುವು ಬಂದಾನ ಬನ್ನಿರೇ
ಸ್ವಾಮಿ ನಮ್ಮಯ ರೇವಣನು ಬಂದಾನ ಬನ್ನಿರೇ
ಸ್ವಾಮಿ ದೇವರ ದೇವನು ಬಂದಾನ ಬನ್ನಿರೇ
ಕುರಿಹಾಲಿನ ನೊರೆಯಲಿ ನಲಿಯುತ ತಾ
ಹಿರಿಹಿರಿ ಹಿಗ್ಗಿ ಕುಣಿದಾನೋ ಶಿವ
ಹಿರಿಯರೆಲ್ಲರೂ ಹಿಂಬದಿಯಿಂದ
ಹರ ಹರ ಶಿವ ಶಿವ ಎನ್ನುವರೋ
ಹರಿ ತಾನು ತಂದಂತ ಹಾಲನ್ನು ಅರ್ಪಿಸಿ
ಸರತಿಯಲ್ಲಿ ತಾ ಕಾಯುವನೋ
ಸಂತೋಷದಲ್ಲಿ ಮಳುಗಿರಲು ಶಿವಗಣವು
ಸುಳಿಯಿತು ಶೀತ ಮಾರುತವು //...//
ವಚನ=
"ಚಿಂತಿಸಬೇಡಿ ದೇವಾನುದೇವತೆಗಳೇ
ಪಾರ್ವತಿಯು ಎದೆಹಾಲಿನಿಂದ ಸೃಷ್ಟಿಸಿದ
ಕುಲವೊಂದು ಭೂಲೋಕದಲ್ಲಿದೆಯೆನ್ನುತ್ತಾ ಶಿವ
ತಾ ನಂದಿಯೇರಿ ಭೂಮಂಡಲಕ್ಕೆ ಬಂದಾಗ"
ಈಗ ನಮ್ಮಯ ನೆನಪಾಯ್ತಾ ಎನ್ನುತ
ಮುದ್ದಗೊಂಡನು ತಾ ಸಿಡುಕಿದನು
ಹೋಗೋ ಆದಿಗುರುಬ ನೀ ಕೈಲಾಸಕೆನ್ನುತ
ಕುರಿಗಳ ಹಿಂಡಿಗೆ ಬೇಲಿಯ ಹಾಕಿದನೋ
ಶಿವ ತಪ್ಪಿಗೆ ತಲೆಯನು ಬಾಗಿದನೋ
ಉಣ್ಣೆಯ ಕೊಡು ಎನಗೆ ಬೆಣ್ಣೆಯ ಮನಸವನೇ
ಉಂಡು ಉಳಿಯುವೆ ನಿನಜೋತೆಗೆ
ಗೌಡ ದಯಮಾಡು ದೇವಾನುದೇವತೆಗೆ
ವಚನ=
"ಅಂದು ಸೃಷ್ಟಿಯ ಮಾಡಿದ ದೇವಿಗೆ ಇಂದು ಸಂಕಷ್ಟ
ಮಕ್ಕಳಾದ ನೀವು ಮರೆತರೆ ಹ್ಯಾಂಗ ನಾ
ಸಾಕಿದ್ದು ಮೊದಲು ಕುರಿಗಳನು ಗೌಡಪ್ಪ
ಲೋಕಕಾಯುವ ಕೆಲಸ ನಿನಗೆಂದು ಕೊಟ್ಟೆ ಮಗನೆ"
ಹಿಮದ ಸೆಳೆತಕೆ ಚಳಿಗಾಲದ ಹೊಡೆತಕೆ
ತತ್ತರಿಸಿದೆ ದೇವತೆಗಳ ಕುಲವು ಗೌಡ
ಮಡಿಯಿರುವ ಮುಡಿಯದು ಬೇಕು
ಉರಿಗದ್ದುಗೆಯೆಂದು ಬಾಳುತಲಿರಬೇಕು
ಕನ್ಯಾದಾನ ಕಂಕಣಧಾರಣೆ ಕಂಬಳಿಯಿಂದಾಗಬೇಕು
ಕಂಬಳಿಯಿಂದ ಮಾಡಿದ ಪೂಜೆಗೆ ಶಿವನು
ಕೈಲಾಸದಿಂದ ಧರೆಗೆ ಬರಬೇಕು
ಅವರ ಮನೆಯಲಿ ಧ್ಯಾನವ ಮಾಡಬೇಕು
ವಚನ=
"ಈ ಕುರಿಗಳು ನಡೆವ ಹಾದಿಯಲ್ಲಿ
ಹುಲ್ಲು ಹುಲುಸಾಗಲಿ ಲಕ್ಷ್ಮೀ ಹಿಂಬಾಲಿಸಲಿ
ವಿಷ್ಣು ತಾ ಬೆಣ್ಣೆತಿನ್ನಲು ಹಾಲ್ಮತದಲಿ ಹುಟ್ಟಲಿ
ಮುಂದೊಮ್ಮೆ ದಕ್ಷನಿಗೆ ತಲೆಯಾಗಲಿದೆ ಗೌಡ"
ಅಯ್ಯಾ ಶಿವನೇ ಜಗದಲಿ ನಿನ್ನಯ ಬಿಟ್ಟು
ಉಳಿದ ಎಲ್ಲ ನಶ್ವರವೋ ಪಶುಪತಿ
ಆದಿಗುರುಬನೇ ಅಂತರಾತ್ಮನೇ
ಅರಿತೆನು ನಿನ್ನಯ ಲೀಲೆಯನು
ಕುರಿಯುಣ್ಣೆಯಿಂದ ಕಂಬಳಿ ನೇಯ್ದು
ನೇಕಾರಿಕೆಯನೂ ನೀ ಮಾಡು
ನಿನ್ನಯ ವೃತ್ತಿಯ ನಾ ಮಾಡಿ ಕಾಪಾಡುವೆ
ಜಗದೊಳಗಿನ ಈ ಮನುಕುಲವನ್ನು
ವಚನ=
"ನೀ ಕರೆದಾಗ ನಾ ಬರುವೆ; ನಿನ್ನ ದೊಡ್ಡಿಯಲ್ಲಿ
ಲೆಕ್ಕವ್ವಳಾಗಿರಲಿ ಲಕುಮಿ ವಿಷ್ಣು ವೆಂಕಟನಾಗಲಿ
ಡೊಳ್ಳಿಂದ ಬ್ರಹ್ಮನಾದ ಹೊರಹೊಮ್ಮಲಿ
ಶಿವಗಣವೇ ಶರಣರಾಗಿ ಜನ್ಮತಾಳಲಿ ಮಗನೇ"
ಕಂಬಳಿ ಬಂದಿತು ಕಷ್ಟವು ಕರಗಿತು
ದೇವತೆಗಳು ಶಿವಗೆ ಶರಣೆಂದಾರು
ಕ್ಷೀರವಂಶದಲಿ ಕೃಷ್ಣನು ಬಂದ
ಲಕುಮಿಬಂದಳು ಕೊಲ್ಲಾಪುರದಲ್ಲಿ
ವೀರಭದ್ರ ಮತ್ತದುಯಿಸಿದ ಶಾರದೆ ಮಡಿಲಲ್ಲಿ
ಕಲಿಯುಗದಲ್ಲಿ ರೇವಣನಿಂದ
ಶರಣಮತ ತಾ ಉದಯಿಸಲು ಒಡೆಯರು
ಜೈ ಎಂದಾರೋ ಶಿವನಿಗೆ ಶರಣೆಂದರು ಹರನಿಗೆ
©️ಎಂ.ಸಿ. ಗಾಜಿ®️
ವಿದ್ಯಾರ್ಥಿ
ಜಿಎಫ್ ಜಿಸಿ ಹಾವೇರಿ
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ
(ಡೊಳ್ಳಿನ ಪದದ ಶೈಲಿಯಾಗಿದೆ. ಇದು ಎರಡನೇ ಪ್ರಯತ್ನ ತಪ್ಪಾದರೆ ಕ್ಷಮೆಯಿರಲಿ. ಹೆಸರು ಅಳಿಸಿ ನಕಲು ಮಾಡುವುದು ಅಪರಾಧ)